In search of NONE........
ನನಗೆ ಕೆಲವು ವಿಕಾರಗಳನ್ನು ವಿಶದಪಡಿಸಬೇಕು ಎನ್ನಿಸುತ್ತದೆ, ಸತ್ಯವು ಬದಲಾಗುವುದಿಲ್ಲ ಅಸತ್ಯವು ಅಶಾಶ್ವತ ಎಂದು ನನಗೆ ಅರಿವಾಗುವ ವೇಳೆಗೆ ಬಹಳ ಕಾಲವು ಕಳೆದು ಹೋಗಿತ್ತು. ಆದರೇನು ಯಾವುದು ಯಾವಾಗ ಆಗಬೇಕೆನ್ದಿರುತ್ತದೆಯೋ ಆಗಲೇ ಆಗುವುದು. ಈ ಮಾತಿನ ಅರ್ಥವು ಬಹಳ ಮಾರ್ಮಿಕವಾಗಿದ್ದು ಸುಮ್ಮನೆ ಎದುರಿಗಿರುವವರ ಸಮಾಧಾನಕ್ಕೆ ಹೇಳುವುದಾದರೂ ನಮ್ಮ ಅನುಭವಕ್ಕೆ ಬರುವುದು ನಮಗೆ ನಮ್ಮ ಅನಿಸಿಕೆಗಿಂತ ವಿಪರೀತವಾದ ಯಾವುದೋ ಘಟನೆ ನಡೆದಾಗ ಮಾತ್ರ !!
ಸಂಪೂರ್ಣ ಭೌತಿಕ ಪ್ರಪಂಚವೇ ಜೀವನವೆಂದು ನಾನು ಬಹಳ ಕಾಲ ಸವೆಸಿದ ಮೇಲೆ........... ಅದೇನೋ ಹೇಳುವರಲ್ಲ ಹಾಗೆ ಬೇರೆಲ್ಲಿಯೂ ಹೋಗಲು ದಾರಿಯಿಲ್ಲದೆ ವಿಧಿ ನಡೆಸಿದ ಮಾರ್ಗದಲ್ಲಿ ನಡೆಯಲೇ ಬೇಕಾದಂತೆ ನಡೆದೆ ಆದರೆ ಅದನ್ನು ಬಿಟ್ಟು ನನ್ನ ಮನಸ್ಸಿನಲ್ಲಿ ಯಾವ ಆಲೋಚನೆಗಳನ್ನು ಭಗವಂತನು ಮೂಡಿಸಿದನೋ ಅದರಂತೆ ಅನೇಕ ಸದ್ವಿಚಾರಗಳನ್ನು ಅಧ್ಯಯನ ಮಾಡಿದೆ. ಅನೇಕ ಗ್ರಂಥಗಳ ಸಂಗ್ರಹವಿದೆ. ಅನೇಕ ಕರಕುಶಲ ವಿದ್ಯೆಗಳನ್ನು ಕಲಿತೆ.
ಇವೆಲ್ಲವೂ ಉಪಯೋಗವಾಗುವಂತೆ ನಾನೇ ಮಾಡಬೇಕಾದಂತಹ ಬಹುದಾದಂತಹ ಕೆಲಸಗಳನ್ನು ಒಪ್ಪಿ ಮಾಡಿದೆ. ಅವುಗಳಲ್ಲಿ ಭಾರತ್ ಸ್ವಾಭಿಮಾನ್ ಪತಂಜಲಿ ಯೋಗಪೀಠ ಗಳ ಅನೇಕ ಕರಪತ್ರಗಳ ಅನುವಾದ ಮೊದಲಾಗಿ ಸಣ್ಣ ಲೇಖನಗಳು ನಂತರ ರಾಜೀವ್ ದಿಕ್ಷಿತ್ ರ ಪ್ರವಚನವನ್ನಾಧರಿಸಿದ ಅನೇಕ ಕಿರು ಪುಸ್ತಕಗಳು, ಅದರಲ್ಲಿ ಒಂದು 'ಸ್ವಾಸ್ಥ್ಯ ಕಥೆ'ಎಂದು ಪುಸ್ತಕ ರೂಪದಲ್ಲಿ ಪ್ರಕಟವೂ ಆಯಿತು. ರಾಜೀವ್ ದಿಕ್ಷಿತ್ ರು ಶ್ರೀರಾಮರ ಕಥೆಯನ್ನೂ ಜನರಿಗೆ ವಿಶಿಷ್ಟವಾದ ವಿಧಾನದಲ್ಲಿ ತಲುಪಿಸಿದ್ದಾರೆ. ಅದರಲ್ಲಿ ತಮ್ಮ ರಾಮರಾಜ್ಯದ ಮೂಲ ಸಿದ್ಧಾಂತವಾದ 'ಪ್ರಜಾಧೀನ ರಾಜ' ರಾಜ ನಿಯಂತ್ರಣ ರೀತಿಯನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಅದೊಂದೇ ಬೃಹತ್ತಾದ ವಿಚಾರವಾಗಿದೆ.
ಬಹಳ ಪರಿಶ್ರಮದಿಂದ ಸಾಧಿಸಿದ ತಪಸ್ಸಿನ ಫಲಿತಾಂಶ ಒದಗುವ ಮೊದಲೇ ರಾಜೀವ್ ದಿಕ್ಷಿತ್ ನಮ್ಮನ್ನಗಲಿದರು. ಅದು ನಮ್ಮ ದುರ್ಭಾಗ್ಯ. ಏನೇ ಆದರು ಅವರು ನಮಗೆ ನೀಡಿದ ಸಂದೇಶಗಳನ್ನು ಜೊತೆಗಿಟ್ಟುಕೊಂಡು ಮುನ್ನಡೆಯನ್ನು ಇಡುತ್ತಿರುವವರ ಕೃತಿಗಳಲ್ಲಿ ರಾಜೀವ್ ರನ್ನು ಗುರುತಿಸಬೇಕಷ್ಟೇ!
ರಾಜೀವ್ ದಿಕ್ಷಿತರನ್ನು ಅಷ್ಟೇ ಗೌರವದಿಂದ ಕಾಣುವ ಇನ್ನೊಂದು ಗುಂಪು 'ಪ್ರಜಾಧೀನ ರಾಜ'ನಾಗಲು ಯಾವ ಕಾನೂನನ್ನು ಜಾರಿಗೊಲಿಸಬೇಕೋ ಅವುಗಳ ಕರಡುಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಗುಂಪು. ಅವರ ಸಹಚಾರಣೆ ದೊರೆತುದಲ್ಲದೆ ಅಲ್ಲಿಯ ಅನೇಕ ಕಾನೂನು ಕರಡುಗಳನ್ನು ಭಾಷಾಂತರಿಸಿದೆ. ಸಂಪೂರ್ಣ ಗ್ರಂಥವನ್ನು ಅನುವಾದಿಸಲು ಸಹಯೋಗಕ್ಕಾಗಿ ಎದುರು ನೋಡುತ್ತಿದ್ದೇನೆ.
ಇದು ಪ್ರಯಾಣದ ಆರಂಭದ ಹೆಜ್ಜೆಗಳು............
No comments:
Post a Comment